April 26, 2018
“ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ “. ಶ್ರೀ ಪುರಂದರದಾಸರ ಕೃತಿಯೊಂದರ ಪಲ್ಲವಿ ಇದು. ಇತರರನ್ನು ತೆಗಳಲು ಹೀಯಾಳಿಸಲು ಜರಿಯಲು ದೂಷಿಸಲೆಂದೇ ನಮ್ಮ ನಾಲಿಗೆ ಇರುವುದೋ ?ಎಂಬಂತೆ ಮೇಲ್ನೋಟದ ಅರ್ಥ ಕೊಡುವ ಸಾಲು ಇದು. ಇದು ಎಷ್ಟರ ಮಟ್ಟಕ್ಕೆ ಸರಿ? ಉತ್ತರ ಬೇರೆಯೇ ಆಗಿದೆ . ನಾಲಿಗೆಯಿಂದ ಆಡುವ ಪದದಿಂದ ವ್ಯಕ್ತಿ ಹಾಗು ವ್ಯಕ್ತಿಯ ವ್ಯಕ್ತಿತ್ವದ ನಗ್ನ ಸತ್ಯವನ್ನು ತೆರೆದಿಡುವ ಪ್ರಯತ್ನವನ್ನು ಹರಿದಾಸರು ಕೈಗೊಂಡಿರುವುದು ಸೂಚ್ಯವಾಗುತ್ತದೆ.
ಮನುಜ ಸಹಜವಾದ ಪ್ರವೃತ್ತಿಯೆಂದರೆ , ನಾನು ಸರಿ ಪರರು ತಪ್ಪು ಎಂಬ ಪೂರ್ವ ಕಲ್ಪಿತ ಮನೋಸ್ಥಿತಿ . ಈ ಮನಸ್ಥಿತಿಯ ಜಾಡಿನಲ್ಲಿ , ಪರರಿಂದ ಆಡಲ್ಪಡುವ ಮಾತು , ಮಾಡಲ್ಪಡುವ ಕ್ರಿಯೆ ಹಾಗು ನೀಡಲ್ಪಡುವ ಸಲಹೆ ಅಭಿಪ್ರಾಯಗಳನ್ನು ನಾವು ಗ್ರಹಿಸಲು ಹೊರಟಾಗ , ನೋಡುವ ಕಣ್ಣುಗಳು ತಪ್ಪನ್ನೇ ಅರಸುವ ಭೂತಗಾಜಿನಂತಾಗಿರುತ್ತದೆ . ಮನಸ್ಸು ವಿಕಾರದ ಮಹಿ ಹತ್ತಿಸಿಕೊಂಡು ಮಂದವಾದ ಬುದ್ಧಿ ಸರಿಯನ್ನೂ ತಪ್ಪೆಂದೇ ತೀರ್ಮಾನಿಸುವ ನಿರ್ಣಾಯಕ ಸ್ಥಾನ ಅಲಂಕರಿಸುತ್ತದೆ . ಸರಿಯಿದ್ದರೂ ಸ್ಪುಟವಿದ್ದರೂ ಸತ್ಯವಿದ್ದರೂ ಇದು ಪರರು ಮಾಡಿದ ಕ್ರಿಯಾ ಪರರು ಆಡಿದ ಮಾತು ಎಂಬ ಒಂದೇ ಕಾರಣಕ್ಕಾಗಿ “ಇದು ತಪ್ಪೇ” ಎಂದು ನೋಡುವ ನೋಟ , ಹೇಳುವ ಬುದ್ಧಿ ಯಾಕಾಗಿ ಹೀಗೆ ವರ್ತಿಸುತ್ತದೆ? ಅದೇ ಪ್ರತಿಯೋರ್ವನ ಒಳಗೆ ಅಡಗಿರುವ ಆತ್ಮ ಪ್ರಶಂಸಾ ಭಾವದ ಉತ್ತುಂಗ ಸ್ಥಿತಿಯಲ್ಲಿ ಮದದ ರಂಗಿನಿಂದ ಬೀಗುವ ಮರ್ಕಟ ಮನದ ಮಾನವನ ಮೋಹ ಮಮಕಾರ .
ಪರರನ್ನು ಉದಾಸೀನ ದೃಷ್ಟಿಯಿಂದ ನೋಡುವ ಹುಂಬುತನದೊಡನೆ ನಾವು ಬೆಳೆಸಿಕೊಳ್ಳುವ ಮತ್ತೊಂದು ಆಘಾತಕಾರಿ ಸ್ವಭಾವವೆಂದರೆ ವಸ್ತುಸ್ಥಿತಿಯ ಪೂರ್ವಾಪರಗಳನ್ನು ವಿಮರ್ಶಿಸದೇ ಇತರರನ್ನು ನಮ್ಮ ನಿಂದನೆ , ತೆಗಳಿಕೆ , ಕೀಳು ಅಭಿಪ್ರಾಯಗಳಿಗೆ ಗುರಿಮಾಡುವುದು. ಅವರನ್ನು ಅವಮಾನಿಸುವುದರಲ್ಲೇ ವಿಕೃತ ಆನಂದ ಅನುಭವಿಸುವುದು . ಲಗಾಮಿಲ್ಲದ ವಾಜಿಯಂತೆ ದಿಕ್ಕಾಪಾಲಾಗಿ ಓಡುವ ನಾಲಿಗೆಯಿಂದ ಹೊರಬರುವ ಪದಗಳು ಯಾವ ಸಂಕೋಲೆಯಿಲ್ಲದ ನಿರ್ಭಿಡೆಯಿಂದ ವರ್ತಿಸುವಾಗ ಆ ಪದಗಳು ಪರರ ವ್ಯಕ್ತಿತ್ವದ ಚಿತ್ರ ಮೂಡಿಸುವ ಬದಲಿಗೆ ಆಡಿದ ನರನ ವಿಕೃತ ಮನಃಸ್ಥಿತಿ ತೆರೆದಿಡುವ ವಿಶಾಲ ಪರದೆಯಾಗುತ್ತದೆ. .
ಆತ್ಮಾವಲೋಕನ ಮಾಡಿಕೊಂಡರೆ …… ಪರರಿಂದ ಆದ ಅಥವಾ ಆಗದಿದ್ದರೂ ನಮಗೆ ಅವರಲ್ಲಿ ಕಂಡು ಬಂದ ಕುಂದು ಕೊರತೆ ನ್ಯೂನ್ಯತೆ ದೋಷ ಇವು ನಮ್ಮಲಿ ಇಲ್ಲವೇ? ನಾವು ದೋಷವರ್ಜಿತರು ಅವರು ದೋಷಪೂರಿತರೇ ? ನಮ್ಮಲ್ಲಿರದ ವಿಕಾರ ಅವರಲ್ಲಿರಿವುದೆ ?
ಈ ಮೇಲಿನ ಮಾರ್ಮಿಕ ಪ್ರಶ್ನೆಗಳ ಅಡಿಯಲ್ಲಿ ಹುದುಗಿರುವ ಕಠೋರ ಉತ್ತರಗಳು ಹೀಗಿವೆ . ಆ ಎಲ್ಲಾ ಕುಂದು ದೋಷ ನ್ಯೂನತೆ ವಿಕಾರ ಇರುವುದು ನಮ್ಮಲೇ . ಆದರೆ ನಮಗೆ ನಮ್ಮ ಮೇಲಿರುವ ಕಟ್ಟಾ ವ್ಯಾಮೋಹ ಅಭಿಮಾನ ಮಮಕಾರಗಳು , ಆ ದೋಷಗಳಿಗೆ ಮುಸುಕು ಹಾಕಿಬಿಡುತ್ತದೆ.
ನಮಗೆ ನಮ್ಮಮೇಲಿರುವಷ್ಟೇ ಪ್ರೀತಿ ಅನನ್ಯಭಾವ ವಿಶ್ವಾಸ ಇತ್ಯಾದಿಗಳನ್ನ ಪರರಲ್ಲೂ ಕಾಣುವಷ್ಟು ಹೃದಯ ವೈಶಾಲ್ಯವಿದ್ದಿದ್ದರೆ ಈ ರೀತಿಯ ವೈಷಮ್ಯ ವೈಮನಸ್ಸು ವಿಕೃತ ಮನಸ್ಥಿತಿ ನೋಡುವ ನಮ್ಮಲ್ಲಾಗಲಿ , ನಮ್ಮ ಮನೋಭಾವದಲ್ಲಾಗಲಿ ಇರುತಿರಲಿಲ್ಲ. ಒಂದು ತಿಳಿಯಾದ ಶುಭ್ರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು .
ಈ ಮೇಲಿನ ಸಾರಾಂಶವನ್ನೇ ಎತ್ತಿ ಹಿಡಿಯುವ ಒಂದು ಆಂಗ್ಲ ಹೇಳಿಕೆ ಈ ರೀತಿಯಾಗಿದೆ .
” if you love yourself despite your infinite faults, how can you hate anyone at the glimpse of a few faults”?
ಪೂರ್ಣದೆಡೆಗೆ ಪಕ್ವತೆಯೆಡೆಗೆ ನಮ್ಮನ್ನು ಕೊಂಡೊಯ್ಯುವುದೇ ಬೆಳವಣಿಗೆಯ ಮೂಲ ಉದ್ದೇಶ. ಪರಿವರ್ತನೆಗಳು ಈ ಬೆಳವಣಿಗೆಯ ಹಾದಿಯಲ್ಲಿ ಕಂಡುಬರುವ ಮೈಲಿಗಲ್ಲುಗಳು . ನಮ್ಮ ನಮ್ಮಲ್ಲಿ ಸಾತ್ವಿಕವಾದ ಪರಿವರ್ತನೆಗಳು ಉಂಟಾದಲ್ಲಿ ಪರರ ನಿಂದಿಪುದಕ್ಕಾಗೆಯೇ ಎಂಬ ಅಪವಾದಕ್ಕೆ ಗುರಿಯಾಗಿರುವ ನಾಲಿಗೆಯನ್ನು ಪರರ ಗುಣಗ್ರಹಿಸುವ ಸಾತ್ವಿಕ ವ್ಯಕ್ತಿತ್ವದ ದರ್ಪಣವನ್ನಾಗಿ ಮಾಡಿಕೊಳ್ಳಬಹುದು .
April 5, 2019
April 27, 2018
You must be logged in to post a comment.