Significance of narasimha jayanthi
Significance of narasimha jayanthi

‘ಭಕುತ ಜನ ಮುಂದೆ ನೀನವರ ಹಿಂದೆ’ ಇದು ಒಂದು ದಾಸೋಕ್ತಿ  . ಭಗವಂತನಿಗಿಂತ ಭಕುತರೇ ಒಂದು ಕೈ ಮೇಲೆಂದು ಸಾರುವ ಮಾತು .

ನಿಷ್ಕಾಮವಾಗಿ ಭಗವಂತನಲ್ಲಿ ಭಕ್ತಿ ಮಾಡುವ ಭಾಗವತೋತ್ತಮರ ಮಹಿಮೆ ಸಾರುವ ಮಾಸ ಈ ವೈಶಾಖ ಎಂದರೆ ಅತಿಶಯೋಕ್ತಿ ಏನಲ್ಲ . ‘ತನ್ನ ಭಕುತರಿಗಾಗಿ ಮಾಡುವೆ ಹಬ್ಬಿಕೊಂಡ ಸುಲಭ ದೇವರ ದೇವಾ ವಿಜಯ ವಿಠ್ಠಲ ವೆಂಕಟ’ ಎಂದು ವಿಜಯ ದಾಸರುವರ್ಣಿಸಿದ್ದು ಯುಗದೈವ ಶ್ರೀ ಶ್ರೀನಿವಾಸನ ಕಲ್ಯಾಣಮಹೋತ್ಸವವನ್ನು ನಿತ್ಯಾವಿಯೋಗಿನಿಯಾದ ಪದ್ಮಾವತಿಯ ಕೊರಳಿಗೆ ಮಂಗಳಸೂತ್ರವನ್ನು ಜಗದ್ಪ್ರಭು ಶ್ರೀ ಶ್ರೀನಿವಾಸ ಕಟ್ಟಿದ್ದು ವೈಶಾಖ ಶುದ್ಧ ದಶಮಿಯಂದು . ಅದು ಭಕುತರಿಗಾಗಿ ನಡೆದ ಕಲ್ಯಾಣ .ಅವರ ಕಲ್ಯಾಣಕ್ಕಾಗಿ ಆದ ಪರಬ್ರಹ್ಮ ಹಾಗು ಪದ್ಮಿನಿಯ ಪರಮ ಮಂಗಳ ಮಹೋತ್ಸವ .

ಇದೇ ಮಾಸದ  ಮತ್ತೊಂದು ವಿಶೇಷವೆಂದರೆ ಭಕುತನ ವಚನ ಸತ್ಯ ಮಾಡುವ ಸಲುವಾಗಿ ಸ್ಥ೦ಭದಿಂದುದುಭವಿಸಿ  ಬಂದ ನರಸಿಂಹನ ಅವತಾರವಾದ ದಿನ . ಪ್ರಥಮಾಂಗ ಸಂಭೂತನಾದ ಋಜುಗಣದರಸನೂ ಸತ್ಪ್ರಚುರನು ಆದ ಚತುರ್ಮುಖ ಬ್ರಹ್ಮನೆಂಬ ತನ್ನ ಭಕುತ ಹಿರಣ್ಯ ಕಶಿಪುವಿಗೆ ಇತ್ತ ವರವೆಂಬ ಮಾತು ದಿಟಮಾಡುವ ಪರಿಯಲ್ಲೇ ಮೃಗನಲ್ಲದ ನರನಲ್ಲದ ಅನನ್ಯ ಅವತಾರ ಹೊತ್ತು ಪ್ರಾದುರ್ಭವಿಸಿದ ಶ್ರೀಹರಿಯ  ವಿಶೇಷ ದಿನ .

ರಕ್ಕಸ ಕುಲದಲ್ಲಿ ಪುಟ್ಟಿದರೂ ಭಾಗವತೋತ್ತಮನಾಗಿ ಮೆರೆದ ಪ್ರಹ್ಲಾದ ಭಕುತಿಗೆ ಸ್ವರೂಪ ಸಾಮರ್ಥ್ಯ ಮುಖ್ಯವೇ ಹೊರತು, ಹುಟ್ಟಿನಿಂದಾಗಿ ಅಂಟಿಕೊಳ್ಳುವ ದೇಹವಲ್ಲ ಎಂದು ಸಾಬೀತು ಮಾಡಿದ ಪರಮ ಭಕ್ತ. ಶ್ರೀಹರಿ ದ್ವೇಷಿಯಾದ ತನ್ನ ತಂದೆಗೆ ಹಂತಹಂತದಲಿ ಶ್ರೀಹರಿಯ ಪಾರಮ್ಯ ಸತ್ಯ ಸಂಕಲ್ಪನಾದ ಅವನ ಅಚಿಂತ್ಯಾದ್ಭುತ ಶಕ್ತಿ ತೋರುತ್ತಲೇ ಹೋದ ಅಚಲಭಕ್ತ. ಶಾಪಗ್ರಸ್ಥ ಜಯವಿಜಯ ನಾಮಕ ವೈಕುಂಠದ ದ್ವಾರ ಪಾಲಕರು ಹಿರಣ್ಯಕಶಿಪು , ಹಿರಣ್ಯಾಕ್ಷರೆಂಬ ಮದಾಂಧ ದೈತ್ಯರಾಗಿ ಹುಟ್ಟಿದ್ದಾರೆ . ಶ್ರೀಹರಿಯನ್ನು ಕೆಣಕುವ ಸಲುವಾಗಿ ಭೂದೇವಿಯನ್ನು ಹೊತ್ತೊಯ್ದ ಹಿರಣ್ಯಾಕ್ಷನನ್ನು ವರಾಹ ರೂಪದಿಂದ ಶ್ರೀಹರಿ ಸಂಹರಿಸಿದ . ಇದೇ ಕಾರಣ ಹಿರಣ್ಯಕಶಿಪುವಿಗೆ ಶ್ರೀಹರಿಯಲ್ಲಿನ ದ್ವೇಷ ಜೀವನದ ಗುರಿಯಾಗಿ ಮಾರ್ಪಾಡಾಯಿತು. ಅಂತಹ ಭಗವದ್ವೇಶಿಯ ಬಾಯಲ್ಲಿ ‘ನಾರಾಯಣ, ನಾರಾಯಣ ‘ಎಂದು ಪ್ರಾಸಂಗಿಕವಾಗಿ ನಾಮಸ್ಮರಣೆ ಮಾಡಿಸುತ್ತಾ ಆತನ ಪತ್ನಿಯಾದ ಕಯಾದುವಿನಲ್ಲಿ ಗರ್ಭಾನ್ಕುರ ಮಾಡಿಸಿದ ಆ ಭಗವಂತ .

ಇಂದ್ರನ ಭಯ ನಿಮಿತ್ತ ಮಾಡಿ ನಾರದರ ಆಶ್ರಮದಲ್ಲಿ,  ಗರ್ಭಿಣಿಯಾದ ಖಯಾದುವಿಗೆ ಸ್ವತಃ ನಾರದರಿಂದಲೇ ಭಗವಂತನ ಮಹಿಮಾತಿಶಯ ಶ್ರವಣ ಮಾಡುವ ಅವಕಾಶ ಕೊಟ್ಟ ಪ್ರಭು . ಗರ್ಭಸ್ಥ ಶಿಶು ಎಡಬಿಡದೆ  ಶ್ರಾವಣ ಮಾಡಿದ್ದು ಶ್ರೀಹರಿಕಥಾಮೃತ ಸಾರವನ್ನ . ಶಿಶುವಿನಲ್ಲಿದ್ದ ಸ್ವರೂಪ ಲಕ್ಷಣಕ್ಕೆ ಗುರೂಪದೇಶದ ಕನಕಲೇಪವಾಯಿತು. ಶಂಡಾಮರ್ಕರೆಂಬ ದೈತ್ಯ ಗುರುಗಳ ಆಶ್ರಮದಲ್ಲಿದ್ದರೂ ತಾಮರಸಜಲದಂತಿದ್ದ ಪ್ರಹ್ಲಾದ ಹರಿಸರ್ವೋತ್ತಮತ್ವದ ಛವಿಯನ್ನು ತಾನು ಅನುಷ್ಠಾನ ಮಾಡುವುದರ ಜೊತೆ ಜೊತೆಗಾರರಾದ ದೈತ್ಯ ಬಾಲಕರಿಗೂ ಮಾಡಿಸಿದ ವೀರ ವೈಷ್ಣವನಾದ .

ಹರಿಭಕ್ತರೆಂಬ ಒಂದೇಕಾರಣಕ್ಕಾಗಿ ಕುಲಕಂಟಕ ಎಂದು ತಂದೆಯಿಂದಲೇ ದೂಷಿಸಲ್ಪಟ್ಟ ಪುಟ್ಟ ಬಾಲಕ , ತಂದೆಯೊಡ್ಡಿದ ಪ್ರಾಣಾಂತಕ ಪ್ರಯತ್ನಗಳಲ್ಲಿ ಪಾರಾದದ್ದು ತನ್ನೊಳಗಿದ್ದ ಧೃಢವಿಶ್ವಾಸ ಹಾಗು ನಿಚ್ಚಳ ಭಕುತಿಯಿಂದಾಗಿ.

ತಾನೇ ಜನ್ಮವಿತ್ತ ಕೂಸು ಎಂಬುದ ಮರೆತು ಕ್ರೋಧವಶನಾಗಿ ಅಹಂಕಾರದ ಜ್ವಾಲೆಯಲ್ಲಿ ಬೀಗುತ್ತಾ “ಎಲ್ಲಿರುವ ನಿನ್ನ ಹರಿ ” ಎಂದು ಆರ್ಭಟಿಸಲು , ತಂದೆಯ ಅಟ್ಟಹಾಸಕ್ಕೆ ಅಲುಗದೆ ಆತ್ಮವಿಶ್ವಾಸಪೂರಿತನಾಗಿ   “ಎಲ್ಲೆಲ್ಲೂ ಇದ್ದಾನೆ , ನಿನ್ನಲ್ಲು ಇದ್ದಾನೆ, ನನ್ನಲ್ಲೂ ಇದ್ದಾನೆ ” ಎಂದು ಮುಗ್ಧ ಮಾತು ನುಡಿದ ದಿಟ್ಟ ಬಾಲಕ ಪ್ರಹ್ಲಾದ.

ಜಡವಾದ ಕಂಬ ತೋರಿ ‘ಇಲ್ಲಿದ್ದಾನಾ’ ಎಂದು ಕೇಳಿದಾಗ “ಅಲ್ಲೂ ಇದ್ದಾನೆ ” ಎಂಬ ಒಂದೇ ಮಾತು ಸಾಕಾಯಿತು ಶ್ರೀಹರಿಗೆ. ಪ್ರಹ್ಲಾದನಲ್ಲಿದ್ದ ಅಚ್ಛಿನ್ನ ಭಕ್ತಿ,ಅಖಂಡ ಜ್ಞಾನಕ್ಕೆ ಮನಸೋತು ಅವನ ಮಾತು ಸತ್ಯ ಮಾಡುವ ಸಲುವಾಗಿ ಅದೇ ಜಡವಾದ ಕಂಬದಲ್ಲಿ ಊಹಾತೀತ ರೂಪಧಾರಿಯಾಗಿ ಅವತರಿಸಿಯೇ ಬಿಟ್ಟ .

“ಸತ್ಯಂ ವಿಧಾತುಂ ನಿಜಭೃತ್ಯ ಭಾಷಿತಂ ವ್ಯಾಪ್ತಿ೦ಚ ಭೂತೇಷು ಅಖಿಲೇಷು ಪಂತ್ಮನಃ  ಅದೃಶ್ಯತಾಧ್ಯಾದ್ಭುತ ರೂಪಮುದ್ವಹನ್ ಸ್ಥ೦ಭೇ ಸಾಭಾಯಾ೦ ನಮೃಗ೦  ನಮಾನುಷ ”

ವೈಶಾಖ ಶುದ್ಧ ಚತುರ್ದಶಿ ಮುಸ್ಸಂಜೆಯ ಸಮಯ . ಹೊಸ್ತಿಲ ಮೇಲೆ ಕುಳಿತುಕೊಂಡು , ತೊಡೆಯಮೇಲೆ ಹಿರಣ್ಯಕಶಿಪುವನ್ನು ಹೊತ್ತು ತನ್ನ ನಖಗಳಿಂದ ಅವನ ಉದರ ಬಗೆದು ಕರುಳ ತೆಗೆದು ಕೊರಳ ಮಾಲೆ ಮಾಡಿಕೊಂಡ ರೋಷಭೀಷಣ ರೂಪವದು ರಮಬ್ರಹ್ಮಾದಿಗಳ ಸ್ತುತಿಗಳಿಗೂ ಶಾಂತನಾಗದ ನರಹರಿತರಳ ಪ್ರಹ್ಲಾದನ ಸ್ತುತಿ ಕೇಳಿ ಪರಮಶಾಂತನಾದ ಮಹಾಪರ್ವಕಾಲ

ಭಕುತಿ ಸುಖವೊ ರಂಗ ಮುಕುತಿ ಸುಖವೊ ಎಂದು ಕೇಳುವವರಿಗೆ ತಾನು ಭಕ್ತಾಧೀನನು ಭಕ್ತಜನ ಪಾಲಕನೂ ಭಕ್ತವತ್ಸಲನೂ ಎಂದು ತೋರುವ ಮೂಲಕ ಭಕುತಿಯ ಮತ್ತು ಭಕುತರ ಮಹತ್ವ ಸಾರಿದ ಪರಮ ಪರ್ವ

ಲೇಖಕಿ  – ದೀಪಿಕಾ ಪಾಂಡುರಂಗಿ 

Read Significance of Narasimha Jayanti in English

Leave a Reply

satta king tw