ಮೈದುಂಬಿ ಹರಿಯುವ ತುಂಗಭದ್ರೆಯ ಪಾತ್ರೆ , ಧರಣಿಯನ್ನು ರಮಣೀಯವಾಗಿ ಸಿಂಗರಿಸಿರುವ ಹಚ್ಚ ಹಸಿರಿನ ಛಾಪು , ನೇಸರನಿಂದ ರಸಹೀರಿ ಮೈಯರಳಿನಿಂತ ಪುಷ್ಪ ಸಮೂಹ , ವನವನಿತೆಯ ಸೊಗಸ ಬಣ್ಣಿಸಲು ಹಾಡಿ ನಲಿವ ಶುಕಪಿಕಗಳ ಕಲರವ , ಮೈಮನ ಮುದಗೊಳಿಸಲುವ ಮನಮೋಹಕ ಪರಿಸರದ್ಲಲಿ ಲೋಕದ ಸೋಂಕು ತಗುಲದ ಹಾಗೆ , ಲೌಕಿಕ ಜಂಜಾಟದ ಲೇಪ ಸೋಂಕದ ಹಾಗೆ , ತನುವನ್ನು ದಂಡಿಸಿ , ಮನವನ್ನು ಮಥಿಸಿದ , ತೇಜಃ ಪುಂಜ ಪ್ರತೀಕದಂತೆ ಕಾಣುವ ದಿಟ್ಟ ಬಂಡೆಗಳು . ಗಜಗಹ್ವರ ಅಥವಾ ಆನೆಗೊಂದಿಯಲ್ಲಿ ಹರಿವ ತರಂಗಿಣಿಯ ನಡುವೆ ಕಾಣುವುದೇ ನವವೃಂದಾವನದ ನಡುಗಡ್ಡೆ ಕ್ಷೇತ್ರ . ರುದ್ರ ‘ರಮಣೀಯಾ’ ಎಂಬ ವೈಶಿಷ್ಟ್ಯಕ್ಕೆ ಸೂಕ್ತವಾದ ತಾಣ .ಕಣ್ಣುಕೋರೈಸುವ ಜೈವಿಕ ಪರಿಸರದಲ್ಲಿ ಗಜಗಂಭೀರವಾಗಿ ನಿಂತಿದೆ ಭೀಕರ ಬಂಡೆಗಳ ವೈಭವ . ನಿಶೆಯಲ್ಲಿ ನರನಿಗೆ ನಡುಕ ಹುಟ್ಟಿಸಬಲ್ಲ ಕಾರಳತೆಯ ಆಗರವಾಗಿದೆ ಈ ಕ್ಷೇತ್ರ . ಆದರೆ ಸಿದ್ಧಿಪುರುಷರ ಪ್ರಸಿದ್ಧ ತಾಣವಾಗಿ ಕಂಗೊಳಿಸುತ್ತಿರುವ ಮಹಾನ್ ತಪೋಭೂಮಿಯು ಇದೇ ಆಗಿದೆ . ಒಂಬತ್ತು ಜನ ಯತಿಪುಂಗವರ ಮೂಲ ವೃಂದಾವನ ಇರುವ ಶಕ್ತಿಧಾಮವಿದು. ಹೃತ್ಕಮಲದಲ್ಲಿ ತಮ್ಮ ಬಿಂಬಮೂರುತಿಯ ಉಪಾಸನೆಯನ್ನು ನಿರಂತರ ಗೈಯುತ್ತಾ , ಭಕ್ತರಿಗೆ ಕಾಮದೇನುವಾಗಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸುತ್ತಾ ದರ್ಶನ ಈವ ನವ ಯತಿಗಳ ಪುಣ್ಯ ಧಾಮವಿದು .
ಶ್ರೀ ಪದ್ಮನಾಭತೀರ್ಥರ ವೃಂದಾವನದ ಬಲಪಾರ್ಶ್ವದ ಎದರು ದಿಕ್ಕಿನಲ್ಲಿ ಕಲ್ಲಿನ ಚಪ್ಪರದಿಂದ ಶೋಭಾಯಮಾನವಾಗಿ ಕಂಗೋಳಿಸುತ್ತಿರುವುದೇ ಶ್ರೀ ವ್ಯಾಸರಾಜರ ವೃಂದಾವನ .
ಶ್ರೀ ವ್ಯಾಸರಾಜರ ನಾಮ ಸ್ಮರಿಸುತ್ತಲೇ ಚಂದ್ರಿಕಾ ,ನ್ಯಾಯಾಮೃತಾ ,ತರ್ಕತಾಂಡವ ಇತ್ಯಾದಿ ಉದ್ಗ್ರಂಥಗಳ ಸ್ಮರಣೆ ಗೌರವ ಆದರದೊಂದಿಗೆ ಮೂಡಿಬರುತ್ತದೆ. ಅಷ್ಟೇ ಅಲ್ಲದೆ ವಾದಿಗಜ ಸಿಂಹರಾಗಿ ದುರ್ವಾದಿಗಳ ಮದ ಭಂಗಿಸಿದ ಪ್ರಚಂಡತೆ ವಿಜೃಂಭಿಸುತ್ತದೆ. ಹರಿದಾಸ ವರೇಣ್ಯರನ್ನು ಪುಣ್ಯ ಭೂಮಿಗೆ ನೀಡಿದ ಔದಾರ್ಯ ಕಣ್ಣ ಮುಂದೆ ಚಿತ್ರಿತವಾಗುತ್ತದೆ. ಕರ್ನಾಟಕ ಸಿಂಹಾಸನಾಧೀಶ್ವರರಾಗಿ ಪ್ರಜೆಗಳ ಮತ್ತು ನಾಡನ್ನು ಕಾಪಾಡಿದ ಕಾರುಣ್ಯ ಮನದಲ್ಲಿ ಮಾರ್ದನಿಸುತ್ತದೆ. ಕೃಷ್ಣದೇವರಾಯನ ಕುಹಯೋಗ ಪರಿಹಾರ ಮಾಡಿದ ಮಂತ್ರ ಸಿದ್ಧ ಬಲದ ಅನುಭವ ದೊರೆಕಿದಂತಾಗುತ್ತದೆ. ಶ್ರೀ ವ್ಯಾಸರಾಜರ ಅಪಾರಕೀರ್ತಿಯ ಮಂದಾರದ ಪಕಳೆಗಳು ಒಂದೊಂದಾಗಿ ಪಲ್ಲವಿಸತೊಡಗುತ್ತದೆ.
ಇವುಗಳೊಂದಿಗೆ ಕಾಣ ಬರುವ ಮತ್ತೊಂದು ವೈಶಿಷ್ಟ್ಯಯೆಂದರೆ ಅವರಿಂದ ದಕ್ಷಿಣ ಭಾರತದ ಉದ್ದಗಲಕ್ಕೂ ಪ್ರತಿಷ್ಠಾಪಿಸಲ್ಪಟ್ಟ ೭೩೨ ಪ್ರಾಣದೇವರ ವಿಗ್ರಹಗಳು . ಸ್ವಪ್ನ ಸೂಚಕದಂತೆ ಶ್ರೀವ್ಯಾಸರಾಜರು ೭೩೨ ಪ್ರಾಣದೇವರನ್ನು ಪ್ರತಿಷ್ಠೆ ಮಾಡಬೇಕೆಂಬುದನ್ನು ಹರಿಯಾಜ್ಞೆಯಾಗಿ ಸ್ವೀಕರಿಸಿ ಸಂಕಲ್ಪಿಸಲು ತಮ್ಮ ಮೊದಲ ಪ್ರಾಣದೇವರ ಪ್ರತಿಷ್ಠೆಯನ್ನು ನಡೆಸಿರುವುದು ವಿಜಯನಗರದ ರಾಜಧಾನಿ ಹಂಪೆಯ ಚಕ್ರತೀರ್ಥದ ದಕ್ಷಿಣ ಭಾಗದಲ್ಲಿ , ಯಂತ್ರೋದ್ಧಾರಕ ಪ್ರಾಣದೇವರೆಂದೇ ಪ್ರತೀತಿ ಪಡೆದಿರುವ ಆ ಪ್ರಾಣದೇವರ ಪ್ರತಿಷ್ಠೆಯ ಪೂರ್ವ ವೃತ್ತಾಂತ ಬಹಳ ವಿಸ್ಮಯಗಳನ್ನೊಳಗೊಂಡಿದೆ .
ಚಕ್ರತೀರ್ಥದಲ್ಲಿ ಸ್ನಾನ ಆಹ್ನಿಕ ಮುಗಿಸಿ ಪ್ರಶಸ್ತ ಸ್ಥಳದಲ್ಲಿ ತಪೋ ನಿರತರಾಗಿದ್ದ ಶ್ರೀವ್ಯಾಸರಾಜರಾಗಿಗೆ ಎದುರಿಗಿದ್ದ ಬಂಡೆಯೊಂದರಲ್ಲಿ ಕಪಿಯೊಂದು ಮೂಡಿದಂತಾಯಿತು. . ಕಣ್ಣು ತೆರೆಯಲು ಬರಿದಾಗಿದ್ದ ಬಂಡೆ ಕಂಡರು ರಾಜರು . ಮತ್ತೆ ಧ್ಯಾನಸ್ಥರಾಗಲು ಅದೇ ಅನುಭವವಾಗತೊಡಗಿತು. ಇದು ಹಲವು ಬಾರಿಯಾಯಿತು. . ಈ ಘಟನೆಯ ಬಗ್ಗೆ ಅವಲೋಕಿಸುತ್ತಿದ್ದ ರಾಜರಿಗೆ ಸ್ವಪ್ನ ಸೂಚಿತವಾಯಿತು. ಚಕ್ರತೀರ್ಥದ ದಕ್ಷಿಣ ಭಾಗದ ಆ ಪ್ರದೇಶದಲ್ಲಿಯೇ ತ್ರೆತಾಯುಗದಲ್ಲಿ ಸೀತಾನ್ವೇಷಣೆಯಲ್ಲಿದ್ದ ಶ್ರೀರಾಮನನ್ನುಹನುಮಂತನು ಮೊದಲು ಸಂದರ್ಶಿಸಿದ ಸ್ಥಳವೆಂದೂ , ಆ ಶಿಲೆಯ ಮೇಲೆ ಶ್ರೀರಾಮನು ಕುಳಿತು ವಿಶ್ರಮಿಸಿದ್ದ ವಿಚಾರ ತಿಳಿದು ಬಂದಿತು . ಕಪಿಯ ಛಾಯೆ ಮೂಡುತ್ತಿದ್ದ ಶಿಲೆಯ ಮಹಾತ್ಮೆ ತಿಳಿದ ಶ್ರೀರಾಜರು , ಅದೇ ಬಂಡೆಯ ಮೇಲೆ ಅಂಗಾರದಿಂದ ಪ್ರಾಣದೇವರನ್ನು ಬರೆದು ದ್ವಾದಶನಾಮಗಳಿಂದ ಅಲಂಕರಿಸಿದರು. ಅದರ ಎದುರಿಗೆ ತಪೋ ನಿರತರಾದರು. ಕಣ್ತೆರೆದು ನೋಡಲು , ಅಂಗಾರದಲ್ಲಿ ಬರೆದ ಆ ಪ್ರಾಣದೇವರು ಜೀವ ತಳೆದು ಬಂಡೆಯಿಂದ ಹಾರಿ ಅದೃಶ್ಯರಾದರು. . ಹೀಗೆ ೧೨ ಬಾರಿ ಬರೆದ ಚಿತ್ರ ಜೀವ ತೆಳೆದು ಹಾರಿ ಹೋಗುವುದು ಗುರುಗಳ ಅನುಭವಕ್ಕೆ ಬಂದಿತು . ೧೩ನೆಯ ಬಾರಿ ಭಗವದ್ಪ್ರೇರಣೆಯಿಂದ ಶ್ರೀ ವ್ಯಾಸರಾಜರು ಆ ಬಂಡೆಯ ಮೇಲೆ ಮೊದಲು ಒಂದು ಷಟ್ಕೋಣವನ್ನುರಚಿಸಿ, ಅದರ ಸುತ್ತ ವಲಯಾಕಾರವನ್ನು ಯಂತ್ರದಂತೆ ರಚಿಸಿದರು. ಅದರ ಸುತ್ತಲೂ ಪದ್ಮದಳಗಳನ್ನು ಬರೆದರು . ಮಧ್ಯದಲ್ಲಿ ಯೋಗಾಸನಾರೂಢರಾಗಿ ಜಪಮಾಲೆ ಹಿಡಿದು ಧ್ಯಾನಮಗ್ನರಾಗಿ ಕುಳಿತ ಮುಖ್ಯ ಪ್ರಾಣರನ್ನು ಬರೆದರು. ಮೊದಲು ಹಾರಿ ಹೋದ ೧೨ ಕಪಿಗಳನ್ನು , ಪದ್ಮದಳಗಳ ತುದಿಯಲ್ಲಿ ಮುಖ್ಯಪ್ರಾಣನಿಗೆ ಮಾಲಾಕಾರವಾಗಿ ಕಪಿಬಂಧ ಹೆಣೆದರು . ಶ್ರೀಹರಿಯಾಜ್ಞೆಯಂತೆ ಪ್ರಾಣಪ್ರತಿಷ್ಠೆ ಮಾಡಿದರು. ಸನ್ನಿಧಾನ ಸನ್ನಿಹಿತವಾಯಿತು.
“ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು .. ಯಂತ್ರೋದ್ಧಾರಕನೆಂದೂ ಪುರಂದರವಿಠ್ಠಲ ಸಲಹೆಂದು …… ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲಗಾಣ.. ಪಿಡಿದ್ಯೋ ರಾಮರ ಚಾರಣ ನೀ ಹೌದೌದೋ ಜಗತ್ರಾಣ. ” ಇದು ನಾರದಾಂಶ ಸಂಭೂತರ ಭವ್ಯ ವರ್ಣನೆ.
” ಒಂದು ಕೋಟಿ ಬೀಜ ಮಂತ್ರದಿಂದ ಸುತ್ಯಂತ್ರವ ಬರಿಸಿ ಅಂದು ಪ್ರಾಣ ಪ್ರತಿಷ್ಠೆಯ ಮಾಡಿ ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸ ಮುನಿಗಳು ಒಂದು ಕರದಲಿ ಜಪಮಾಲೆ ಒಂದು ಕರ ನಾಭಿ ಕೆಳಗೆ ಚಂದದಿಂದ ಪದುಮಾಸನದಿಂದ ಕುಳಿತು ನಿತ್ಯ ನಿತ್ಯಾನಂದ ವಿಜಯ ವಿಠಲನ್ನ ವಂದಿಸಿ ವರಗಳ ಕೊಡುತ , ಬಂದ ನರರ ಪಾಲಿಸುತ್ತ” .
ಈ ಮೇಲಿನ ಸಾಲುಗಳಲ್ಲಿ ಶ್ರೀ ವಿಜಯ ದಾಸರು ಆ ಪ್ರಾಣದೇವರ ಹಿರಿಮೆಯನ್ನು, ವ್ಯಾಸರಾಜರ ತಪೋಶಕ್ತಿಯನ್ನು ಹಾಡಿ ಕೊಂಡಾಡಿದ್ದಾರೆ .
ಶ್ರೀ ವ್ಯಾಸರಾಜರೇ ರಚಿಸಿರುವ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಅಷ್ಟಕದಲ್ಲಿ ಕಂಡುಬರುವಂತೆ, ತಂತ್ರಸಾರೋಕ್ತ ವಿಧಿಗಳಿಂದ ಶ್ರೀ ವ್ಯಾಸರಾಜರಿಂದ ಪೂಜಿಸಲ್ಪಟ್ಟ ಪ್ರಾಣದೇವರು , ದೇಶದೇಶಗಳಿಂದ ಬರುವ ಭಕ್ತರಿಗೆ ಇಷ್ಟಾರ್ಥಗಳನ್ನು ಅನುಗ್ರಹಿಸುವುದಕ್ಕೆ ಶ್ರೀ ಹರಿಯೇ ಸಾಕ್ಷಿಯಾಗಿದ್ದಾನೆ .
“ಯಂತ್ರೋದ್ಧಾರಕ ಹನುಮಸ್ತೋತ್ರಮ್ “
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತ ಮಹಾಬಾಹುಂ ಸರ್ವಶತ್ರುನಿವಾರಣಮ್
ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್
ಸರ್ವದಾಭೀಷ್ಟದಾತಾರಂ ಸತಾಂ ವೈ ಧೃಡಮಾಹವೇ
ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥೆ ವಿರಾಜಿತೇ
ತುಂಗಾಭೊಂಧೀತರಂಗಸ್ಯ ವಾತೇನ ಪರಿಶೋಭಿತೇ
ನಾನಾದೇಶಾಗತೈಸ್ಯದ್ಭಿ: ಸೇವ್ಯಮಾನಂ ನೃಪೋತ್ತಮೈ:
ಧೂಪದೀಪಾದಿನೈವೇದೈಹಿ: ಪಂಚಖಾದೈಯ್ಶ್ಚ ಶಕ್ತಿತ:
ಭಜಾಮಿ ಹನುಮತ್ಪಾದಂ ಹೇಮಕಾಂತಿಸಮಪ್ರಭಮ್
ವ್ಯಾಸತೀರ್ಥಯತಿಇಂದ್ರೇಣ ಪೂಜಿತಂ ಪ್ರಣಿಧಾನತ:
ತ್ರಿವಾರಂ ಯಃ ಪಠೇನ್ನಿತ್ಯಂ ಷಣ್ಮಸಾಭ್ಯಂತರೇ ಖಲು
ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥಿ ಲಭತೇ ಯಶ:
ವಿದ್ಯಾರ್ಥಿ ಲಭತೇ ವಿದ್ಯಾಮ್ ಧನಾರ್ಥಿ ಲಭತೇ ಧನಂ
ಸರ್ವಥಾ ಮಾಸ್ತು ಸಂದೇಹೋ ಹರಿಸಾಕ್ಷೀ ಜಗತ್ಪತಿ:
ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧ್ರುವಮ್
।।ಇತಿ ಶ್ರೀ ವ್ಯಾಸರಾಜ ವಿರಚಿತ ಯಂತ್ರೋದ್ಧಾರಕ ಹನೂಮತ್ ಸ್ತೋತ್ರಮ್ ಸಂಪೂರ್ಣಮ್।।
ಲೇಖಕಿ – ದೀಪಿಕಾ ಪಾಂಡುರಂಗಿ