ತಿರುಪತಿ ದೇವಾಲಯದ ಹೊರ ಪ್ರಾಕಾರದಲ್ಲಿ ಶ್ರೀ ವ್ಯಾಸರಾಯರು ೧೨ ವರ್ಷಗಳ ಕಾಲ ಪಾಠ ಮಡಿದ ಸ್ಥಳದಲ್ಲಿ ಅವರದೊಂದು ರೇಖಾಚಿತ್ರವನ್ನು ಬರೆದಿದ್ದು , ಅದು ಮಣ್ಣಿನಲ್ಲಿ ಹೂತುಹೋಗಿತ್ತು . ತಿರುಪತಿಯಲ್ಲಿದ್ದ ಆಚಾರ್ಯರೊಬ್ಬರ ಸ್ವಪ್ನದಲ್ಲಿ ಕಾಣಿಸಿಕೊಂಡ ಗುರುಗಳು ‘ನಾನು ಇಲ್ಲಿದ್ದೇನೆ – ನನ್ನನು ಮರೆಯಬೇಡ ‘ ಎಂದರಂತೆ.
ಮರುದಿನ ಆ ಜಾಗವನ್ನು ಸ್ವಚ್ಛಗೊಳಿಸಲು ಯತಿಶ್ರೇಷ್ಠರ ರೇಖಾಚಿತ್ರ ಕಂಡ ಆ ಆಚಾರ್ಯರು ಭಕ್ತಿ ತುಂಬಿ ಬಂದ ಮನದಿಂದ , ಅವರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತೆ ತಮ್ಮ ರೇಖಾಚಿತ್ರವನ್ನು ತಾವೇ ರಚಿಸಿದ್ದಾರೆ . ಶ್ರೀವ್ಯಾಸರಾಜರ ಪರಮಾಪ್ತ ಶಿಷ್ಯರಾದ , ನಾರದಾಂಶರೆಂದೇ ಗುರುತಿಸಲ್ಪಟ್ಟ ಶ್ರೀ ಪುರಂದರದಾಸರೇ ಮುಂದೆ ಆ ಆಚಾರ್ಯರಾಗಿ ಜನಿಸಿ , ಗುರುಭಕ್ತಿ ಸಮರ್ಪಿಸುತ್ತಿರುವ ದೃಶ್ಯವೇ ಇದು ಎಂಬ ಪ್ರತೀತಿ ಇದೆ. ಈ ದೃಶ್ಯವನ್ನು ಇಂದಿಗೂ ನೋಡಬಹುದು .
ಶಾ . ಶ . ೧೮೬೧,(ಕ್ರಿ .ಶ . ೧೯೩೯) ಪ್ರಮಾಥೀ ನಾಮ ಸಂವತ್ಸರ , ಕಾರ್ತಿಕ ಬಹುಳ ಪಂಚಮಿ . ಆ ಆಚಾರ್ಯರು ಸಾಧನ ಶರೀರವಾಗಿ ದೊರೆತ ಈ ಮಾನವ ಶರೀರವನ್ನು , ತಮ್ಮ ಆರಾಧ್ಯದೇವಾ ಇಂದಿರೇಶನ ಸೇವೆಗೈಯುತ್ತಾ ಸಾರ್ಥಕ ಪಡಿಸಿಕೊಂಡು , ಇಹಲೋಕ ತ್ಯಜಿಸಿದರು . ಅವರೇ ಬೆಟ್ಟದ ಆಚಾರ್ಯರೆಂದೇ ಅನ್ವರ್ಥವಾಗಿ ಕರೆಯಲ್ಪಟ್ಟ ತಿರುಪತಿ – ಶ್ರೀ ಪಾಂಡುರಂಗಿ ಹುಚ್ಚಾಚಾರ್ಯರು .
ಕೊಲ್ಲಾಪುರ ಮಹಾಲಕುಮಿಯ ಅನನ್ಯ ಆರಾಧಕರಾದ ಶ್ರೀ ಆನಂದಭಟ್ಟಾರಕರು ಪಾಂಡುರಂಗಿ ಮನೆತನದ ಮೂಲ ಪುರುಷರು . ಅವರ ಪುತ್ರರಾದ ಶ್ರೀ ನರಸಿಂಹ ಇವರೇ ಮುಂದೆ ದ್ವೈತ ವೇದಾಂತ ಸಿಂಹಾಸನದಲ್ಲಿ ಅಭಿಶಕ್ತರಾಗಿ ‘, ವಾಕ್ಯಾರ್ಥ ಚಂದ್ರಿಕಾಕಾರರೆಂದೇ’ ಪ್ರಖ್ಯಾತರಾದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು .
ಹೀಗೆ ಬೆಳದ ಪಾಂಡುರಂಗಿ ವಂಶದಲ್ಲಿ ಶ್ರೀ ಶ್ರೀನಿವಾಸಾಚಾರ್ಯರು ಹಾಗು ಸೌ ।। ರುಕ್ಮಿಣಿಬಾಯಿಯವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕ್ರಿ .ಶ . ೧೮೬೫ರಲ್ಲಿ ಹುಚ್ಚಾಚಾರ್ಯರ ಜನನವಾಯಿತು .
ಬೆಳೆಯುವ ಪೈರು ಮೊಳಕೆಯೆಲ್ಲಿ ಎಂಬಂತೆ ದಿವ್ಯಚೇತನದ ಪ್ರಭೆ ಬಾಲ್ಯದಲ್ಲೇ ಪ್ರಕಾಶಿಸಲ್ಪಟ್ಟಿತು . ಬ್ರಹ್ಮವಿದ್ಯೆಗೆ ಹೆಸರಾದ ವಂಶದಲ್ಲಿ ಜನಿಸಿದ ಅವರಿಗೂ , ಅವರ ಪೂರ್ವಜರಂತೆ ಜ್ಞಾನ ಭಕ್ತಿಗಳ ಸಾಧನೆ ಮಾಡಬೇಕೆಂಬ ಹಂಬಲ ಉತ್ಕಟವಾಯಿತು . ೧೪ರ ಪ್ರಾಯದಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ತಮ್ಮ ಕುಲದೇವತೆಯ ಪುರವಾದ ಕೊಲ್ಲಾಪುರಕ್ಕೆ ಬಂದು ಆಕೆಯ ಸೇವೆ ಹಾಗು ವಿದ್ಯಾರ್ಜನೆಗೆ ತಮ್ಮನ್ನು ತೊಡಗಿಸಿಕೊಂಡರು .
ಬಾಲಕನ ತೇಜ:ಪುಂಜವಾದ ಮುಖವನ್ನೂ , ಆತನಲ್ಲಿ ಇರುವ ಸಾತ್ವಚೇತನದ ಲಕ್ಷಣಗಳನ್ನೂ ಗಮನಿಸಿದ, ಸಂತಾನ ಹೀನ ಆಗರ್ಭ ಶ್ರೀಮಂತ ಶ್ರೀ ಅಂತಾಜಿಪಂತ ದಂಪತಿಗಳು ಬಾಲಕನಿಗೆ ಆಶ್ರಯನೀಡಿದರು . ಆ ಬಾಲಕನೇ ಅವರಿಗೆ ಸರ್ವಸ್ವ . ಪ್ರಾಪಂಚಿಕ ಸೌಖ್ಯದ ಧಾರೆಯನ್ನೇ ಅವನ ಮೇಲೆರೆದರೂ , ನಿರ್ಲಿಪ್ತನಾದ ಅಂತರ್ಮುಖಿಯಾದ ಬಾಲಕ ತನ್ನ ನಿಜ ಸಾಧನೆಯ ಮಾರ್ಗದಿಂದ ದಿಕ್ಕು ತಪ್ಪಲಿಲ್ಲ .
ಹುಚ್ಚಾಚಾರ್ಯರ ದೈವಭಕ್ತಿ , ಶರಣ್ಯಭಾವ , ಗುರುಭಕ್ತಿ ,ಜ್ಞಾನದಾಹ , ಕಠೋರವಾದ ನೇಮ ನಿಷ್ಠೆ ಆಚಾರಶೀಲತೆ ಎಲ್ಲದರಿಂದಲೂ ಸುಪ್ರೀತಳಾದ ತಾಯಿ ಆಚಾರ್ಯರನ್ನು ಸಂಪೂರ್ಣವಾಗಿ ಅನುಗ್ರಹಿಸಿದಳು .
ಅಧ್ಯಯನವನ್ನು ತಮ್ಮ ಕಕ್ಕಂದಿರಾದ ಶ್ರೀ ಬಾಬಾಚಾರ್ಯರಲ್ಲಿ ಮುಂದುವರೆಸಿದ ಆಚಾರ್ಯರು ಸೌ|| ಹುಚ್ಚಮ್ಮನವರನ್ನು ವಿವಾಹವಾದರು .
ಜಗನ್ಮಾತೆಯ ಸ್ವಪ್ನಾದೇಶದ ಮೇರೆಗೆ ಪರಿವಾರ ಸಮೆತ ಮುಗುಟಖಾನ ಹುಬ್ಬಳ್ಳಿಯ ಅಚ್ಯುತರಾಯನ ಕಟ್ಟೆಯಲ್ಲಿರುವ ಶ್ರೀ ಯಾದವಾರ್ಯ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹ ದೇವರನ್ನು ಸತತ ೧೨ ವರ್ಷಗಳ ಕಾಲ ಭಕ್ತಿ ಭಾವದಿಂದ ಸೇವಿಸಿದರು
ಮಾನವ ವಾಸಕ್ಕೆ ಯೋಗ್ಯವೇ ಅಲ್ಲದ ದಟ್ಟ ಅರಣ್ಯ ಪ್ರದೇಶವಾದ ಆ ಸ್ಥಳಕ್ಕೂ ಮುಂದೆ ದೇವರ ದರ್ಶನಕ್ಕಾಗಿ , ಆಚಾರ್ಯ ತಪ:ಶಕ್ತಿಯ ಅನುಗ್ರಹಕ್ಕಾಗಿ ತಂಡೋಪತಂಡವಾಗಿ ಜನರು ಬಂದು ತಮ್ಮ ಭವ ಸಂಕಟಗಳಿಂದ ಮುಕ್ತರಾಗುತ್ತಿದ್ದರು .
ಮಳಖೇಡದಲ್ಲಿ ಶ್ರೀಮದ್ಜಯತೀರ್ಥರನ್ನು ವಿಶೇಷವಾಗಿ ಸೇವಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಿ ಮುಂದೆ ಹಲವಾರು ಬಾರಿ ಶ್ರೀಮನ್ನ್ಯಾಯ ಸುಧಾ ಪಾಠ ಹಾಗು ಮಂಗಳವನ್ನು ಮುಗುಟಖಾನ ಶ್ರೀಲಕ್ಷ್ಮೀನರಸಿಂಹನಿಗೆ ಸಮರ್ಪಿಸಿದರು .
ರಾಣೇಬೆನ್ನೂರಿನಲ್ಲಿ ವಾಸ್ತವ್ಯ ಮಾಡಿದ ಆಚಾರ್ಯರು ಶ್ರೀ ವಿದ್ಯಾಧೀಶರ ಸೇವೆ ಗೈಯುತ್ತಾ , ಪಾಠ ಪ್ರವಚನ ಪುರಾಣಗಳಿಂದ ಸಮಾಜವನ್ನು ಭಕ್ತಿ ಮಾರ್ಗದೆಡೆಗೆ ಪ್ರಚೋದಿಸಿದರು .
ಸ್ವಪ್ನ ಸೂಚನೆಯಂತೆ ಆಚಾರ್ಯರ ಮನೆಗೆ ಬ್ರಾಹ್ಮಣನೊಬ್ಬ ನೈವೇದ್ಯಕ್ಕೆಂದು ತಂದ ಬೆಲ್ಲದ ಪಿಂಡಿಯಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ವಿಗ್ರಹ ಪ್ರಾಪ್ತವಾಯಿತು .
ಕನಸಿನಲ್ಲಿ ನಾರದರಿಂದ ‘ಇಂದಿರೇಶ ‘ ಎಂಬ ಅಂಕಿತೋಪದೇಶವನ್ನು ಪಡೆದು ಕನ್ನಡ ಭಾಷೆಯಲ್ಲಿ ತಮಗೆ ಪ್ರಾಪ್ತವಾದ ನರಸಿಂಹ , ಇಷ್ಟದೇವ ಬಾಲಕೃಷ್ಣ , ಕುಲದೇವಿ ಕೊಲ್ಲಾಪುರ ಲಕುಮಿ ಹಾಗು ಸಂದರ್ಶಿಸಿದ ಅನೇಕಾನೇಕ ಕ್ಷೇತ್ರಗಳನ್ನು ತಮ್ಮ ಕೃತಿಗಳಲ್ಲಿ ಕೊಂಡಾಡಿದ್ದಾರೆ .
ನಿಂತಲ್ಲಿ ,ಕೂತಲ್ಲಿ, ಕಂಡಲ್ಲಿ, ನಡೆದಲ್ಲಿ ಒಳಗಣ್ಣಿನಲ್ಲಿ ಕಾಣುತ್ತಿದ್ದ ತಮ್ಮ ಬಿಂಬಮೂರ್ತಿಯ ವರ್ಣನೆಗೆ ಆಚಾರ್ಯರ ಬಾಯಿಂದ ಹೊರ ಹೊಮ್ಮುತ್ತಿದ್ದ ಪದಗಳೇ ಪದ್ಯವಾಗುತ್ತಿದ್ದವು . ಅವುಗಳಿಗೆ ಭಕ್ತಿಯೇ ಭಾವ , ಅನುಭವವೇ ಛಂದಸ್ಸು , ಆತ್ಮಾನಂದವೇ ತಾಳದ ಚೌಕಟ್ಟು . ಕೀರ್ತನೆಗಳ್ಲಲಿನ ಸಾಹಿತ್ತ್ಯಂತರ್ಗತ ಭಾವವನ್ನು ವಿಶ್ಲೇಷಿಸಿದರೆ , ನಾನಾ ರೂಪಗಳಲ್ಲಿ ಭಗವಂತ ಆಚಾರ್ಯರೊಡನೆ ಕಳೆದಿರುವ ಅಗೋಚರ ಘಳಿಗೆಗಳು ಗೋಚರವಾಗುತ್ತವೇ .
ತಿರುಪತಿ ಯಾತ್ರರ್ಥಿಗಳಿಗೆ ನಿತ್ಯ ಅನ್ನದಾನ ಅವರ ಮತ್ತೊಂದು ವಿಶೇಷತೆ . ಪ್ರತಿ ವರುಷ ಸಾವಿರಾರು ಆಧ್ಯಾತ್ಮ ಬಂಧುಗಳನ್ನು ಆಹ್ವಾನಿಸಿ ವಿಧಿವತ್ತಾಗಿ , ವಿಜೃಂಭಣೆಯಿಂದ ಶ್ರೀ ಶ್ರೀನಿವಾಸ ಕಲ್ಯಾಣ ಹಾಗು ಶ್ರೀ ಕೃಷ್ಣರುಕ್ಮಿಣಿ ಕಲ್ಯಾಣವನ್ನು ನಡೆಸುತ್ತಿದ್ದರು . ಭೂವೈಕುಂಠವೆಂದೇ ಕರೆಯಲ್ಪಡುವ ತಿರುಪತಿಯ ಕ್ಷೇತ್ರ ಆ ಸಂದರ್ಭದಲ್ಲಿ ವೈಕುಂಠದ ನೈಜ ಚಿತ್ರಣವನ್ನೇ ದಿಗ್ದರ್ಶಿಸುವ ಕ್ಷೇತ್ರವಾಗುತ್ತಿತ್ತು .
ಮಾದ್ವ ಸಮುದಾಯಕ್ಕೆ ಕೊಡುಗೆಯಾಗಿ ಸರ್ವ ಮೂಲ ವಿಮರ್ಶಿ , ಉಪಾದಿ ಖಂಢನ ವ್ಯಾಖ್ಯಾನ , ತತ್ವನ್ಯಾಸ ಮಾತೃಕಾನ್ಯಾಸ ವ್ಯಾಖ್ಯಾನ , ದ್ವಾದಶಸ್ತ್ಹೋತ್ರ ವ್ಯಾಖ್ಯಾನ , ದಶಮಸ್ಕಂದ ಭಾಗವತ (ಕನ್ನಡ) ಹಲವಾರು ಸಂಸ್ಕೃತ ಶ್ಲೋಕಗಳು , ಲಕ್ಷ್ಮೀಲೀಲಾಮೃತ , ಬ್ರಹ್ಮಸೂತ್ರ ಪ್ರಮೇಯ ಮಾಲಾ , ಜಯತೀರ್ಥ ಟೀಕಾಪುಂಜ ಟಿಪ್ಪಣಿ , ಕನ್ನಡ ಸುಂದರಕಾಂಡ ರಾಮಾಯಣ , ಇತ್ಯಾದಿಗಳನ್ನು ನೀಡಿರುತ್ತಾರೆ . ಸಾಹಿತ್ಯ ಭಂಡಾರಕ್ಕೆ ಇದೆಲ್ಲವೂ ಆಗ್ರ ಸಂಪತ್ತಾಗಿದೆ .
ತಮ್ಮ ಜೀವಮಾನದ ಆಗ್ರ ಭಾಗವನ್ನು ತಿರುಪತಿ ಕ್ಷೇತ್ರದಲ್ಲಿ ಕಳೆಯುತ್ತಾ , ಹಲವಾರು ಪವಾಡಗಳನ್ನು ತೋರುತ್ತಾ ಪ್ರಕಟವಾಗುತ್ತಿದ್ದ ದಿವ್ಯ ಜ್ಯೋತಿಯೇ ಪಾಂಡುರಂಗಿ ಹುಚ್ಚಾಚಾರ್ಯರು .
ಇಂದಿಗೂ ತಿರುಪತಿಯ ಉತ್ತರ ದಿಕ್ಕಿನ ನಾಗತೀರ್ಥದ ಸಮೀಪ ಆಚಾರ್ಯರನ್ನು ದಹನ ಮಾಡಿದ ಜಾಗದಲ್ಲಿ ಅಶ್ವತ್ಥ ವೃಕ್ಷದೊಂದಿಗೆ ಚಂದನದ ಗಿಡವೂ ಬೆಳೆದಿರುವ ಚಂದ್ರಗಿರಿಯ ಕಲ್ಲಿಂದ ನಿರ್ಮಿಸಿದ “ಹುಚ್ಚಾಚಾರ್ಯರ ಕಟ್ಟೆಯನ್ನು” ಕಾಣಬಹುದಾಗಿದೆ.
‘ಮಾನವ ಜನ್ಮ ದೊಡ್ಡದು ‘ ಎಂಬ ವಾಕ್ಯವನ್ನು ಸಾಕಾರಪಡಿಸಿಕೊಂಡ ಕೆಲವೇ ಸುಜೀವರಲ್ಲಿ ಬೆಟ್ಟದ ಆಚಾರ್ಯರೂ ಒಬ್ಬರು.
ಇಂತಹ ಪೂಜ್ಯರನ್ನು ಭಕ್ತಿಪೂರ್ವಕವಾಗಿ ನೆನೆದ ದಿನವೇ ಸುದಿನ.
ಲೇಖಕಿ – ದೀಪಿಕಾ ಪಾಂಡುರಂಗಿ